ಆರ್ಥಿಕ ಉದಾರೀಕರಣದ ಹರಿಕಾರ ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ 

ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಮತ್ತು ಪಿವಿ ನರಸಿಂಹ ರಾವ್, ವಿಜ್ಞಾನಿ ಎಂಎಸ್ ಸ್ವಾಮಿನಾಥನ್  ಅವರಿಗೆ ಅತ್ಯುನ್ನತ ನಾಗರಿಕ ಗೌರವ 'ಭಾರತ ರತ್ನ' ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.

Written by - Manjunath Naragund | Last Updated : Feb 9, 2024, 02:10 PM IST
  • ಒಬ್ಬ ಪ್ರಖ್ಯಾತ ವಿದ್ವಾಂಸ ಮತ್ತು ರಾಜನೀತಿಜ್ಞರಾಗಿ, ನರಸಿಂಹ ರಾವ್ ಗರು ಭಾರತಕ್ಕೆ ವಿವಿಧ ಹುದ್ದೆಗಳಲ್ಲಿ ವ್ಯಾಪಕವಾಗಿ ಸೇವೆ ಸಲ್ಲಿಸಿದರು.
  • ಅವರ ದೂರದೃಷ್ಟಿಯ ನಾಯಕತ್ವವು ಭಾರತವನ್ನು ಆರ್ಥಿಕವಾಗಿ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿತು,
  • ದೇಶದ ಸಮೃದ್ಧಿ ಮತ್ತು ಬೆಳವಣಿಗೆಗೆ ಭದ್ರ ಬುನಾದಿ ಹಾಕಿತು" ಎಂದು ಶ್ಲಾಘಿಸಿದರು.
 ಆರ್ಥಿಕ ಉದಾರೀಕರಣದ ಹರಿಕಾರ ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್  title=
file photo

ನವದೆಹಲಿ: ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಮತ್ತು ಪಿವಿ ನರಸಿಂಹ ರಾವ್, ವಿಜ್ಞಾನಿ ಎಂಎಸ್ ಸ್ವಾಮಿನಾಥನ್  ಅವರಿಗೆ ಅತ್ಯುನ್ನತ ನಾಗರಿಕ ಗೌರವ 'ಭಾರತ ರತ್ನ' ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.

ಈ ಕುರಿತಾಗಿ ಎಕ್ಷ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ "ನಮ್ಮ ಮಾಜಿ ಪ್ರಧಾನಿ ಶ್ರೀ ಪಿ ವಿ ನರಸಿಂಹರಾವ್ ಅವರಿಗೆ ಭಾರತ ರತ್ನ ನೀಡಿ ಗೌರವಿಸಲಾಗುವುದು ಎಂದು ಹಂಚಿಕೊಳ್ಳಲು ಸಂತೋಷವಾಗಿದೆ" ಎಂದು ಹೇಳಿದ್ದಾರೆ.

ಇನ್ನೂ ಮುಂದುವರೆದು "ಒಬ್ಬ ಪ್ರಖ್ಯಾತ ವಿದ್ವಾಂಸ ಮತ್ತು ರಾಜನೀತಿಜ್ಞರಾಗಿ, ನರಸಿಂಹ ರಾವ್ ಗರು ಭಾರತಕ್ಕೆ ವಿವಿಧ ಹುದ್ದೆಗಳಲ್ಲಿ ವ್ಯಾಪಕವಾಗಿ ಸೇವೆ ಸಲ್ಲಿಸಿದರು. ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ಹಲವು ವರ್ಷಗಳ ಕಾಲ ಸಂಸತ್ ಮತ್ತು ವಿಧಾನಸಭೆ ಸದಸ್ಯರಾಗಿ ಅವರು ಮಾಡಿದ ಕೆಲಸಗಳನ್ನು ಅವರು ಸಮಾನವಾಗಿ ನೆನಪಿಸಿಕೊಳ್ಳುತ್ತಾರೆ. ಅವರ ದೂರದೃಷ್ಟಿಯ ನಾಯಕತ್ವವು ಭಾರತವನ್ನು ಆರ್ಥಿಕವಾಗಿ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿತು, ದೇಶದ ಸಮೃದ್ಧಿ ಮತ್ತು ಬೆಳವಣಿಗೆಗೆ ಭದ್ರ ಬುನಾದಿ ಹಾಕಿತು" ಎಂದು ಶ್ಲಾಘಿಸಿದರು.

ಪ್ರಧಾನ ಮಂತ್ರಿಯಾಗಿ ನರಸಿಂಹ ರಾವ್ ಅವರ ಅಧಿಕಾರಾವಧಿಯು ಭಾರತವನ್ನು ಜಾಗತಿಕ ಮಾರುಕಟ್ಟೆಗಳಿಗೆ ತೆರೆದು ಆರ್ಥಿಕ ಅಭಿವೃದ್ಧಿಯ ಹೊಸ ಯುಗವನ್ನು ಉತ್ತೇಜಿಸುವ ಮಹತ್ವದ ಕ್ರಮಗಳಿಂದ ಗುರುತಿಸಲ್ಪಟ್ಟಿದೆ. ಇದಲ್ಲದೆ, ಭಾರತದ ವಿದೇಶಾಂಗ ನೀತಿ, ಭಾಷೆ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಅವರ ಕೊಡುಗೆಗಳು ಅವರ ಬಹುಮುಖಿ ಪರಂಪರೆಯನ್ನು ಒತ್ತಿಹೇಳುತ್ತವೆ, ಅವರು ನಿರ್ಣಾಯಕ ರೂಪಾಂತರಗಳ ಮೂಲಕ ಭಾರತವನ್ನು ಮುನ್ನಡೆಸಿದರು ಮಾತ್ರವಲ್ಲದೆ ಅದರ ಸಾಂಸ್ಕೃತಿಕ ಮತ್ತು ಬೌದ್ಧಿಕ ಪರಂಪರೆಯನ್ನು ಶ್ರೀಮಂತಗೊಳಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪಿ.ವಿ.ನರಸಿಂಹ ರಾವ್ ಬೆಳೆದು ಬಂದ ಹಾದಿ: 

ಶ್ರೀ ಪಿ.ರಂಗರಾವ್ ಅವರ ಪುತ್ರರಾದ ಶ್ರೀ ಪಿ.ವಿ.ನರಸಿಂಹ ರಾವ್ ಅವರು ಜೂನ್ 28, 1921ರಲ್ಲಿ ಕರೀಂನಗರದಲ್ಲಿ ಜನಿಸಿದರು. ಅವರು ಹೈದರಾಬಾದ್ನ ಓಸ್ಮಾನಿಯಾ ವಿಶ್ವವಿದ್ಯಾಲಯ, ಬಾಂಬೆ ವಿಶ್ವವಿದ್ಯಾಲಯ ಮತ್ತು ನಾಗ್ಪುರ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಾರೆ. ಶ್ರೀ ಪಿ.ವಿ.ನರಸಿಂಹ ರಾವ್ ಅವರಿಗೆ ಮೂವರು ಪುತ್ರರು ಮತ್ತು ಐವರು ಪುತ್ರಿಯರಿದ್ದಾರೆ.

ಕೃಷಿ ಮತ್ತು ಓರ್ವ ವಕೀಲರಾದ ಅವರು ರಾಜಕೀಯ ಪ್ರವೇಶಿಸಿ ಕೆಲವು ಮುಖ್ಯ ಖಾತೆಗಳನ್ನು ನಿರ್ವಹಿಸಿದರು. ಅವರು ಆಂಧ್ರಪ್ರದೇಶ ಸರ್ಕಾರದಲ್ಲಿ 1962-64ರವರೆಗೆ ಕಾನೂನು ಮತ್ತು ವಾರ್ತಾ ಸಚಿವರು ; 1964-67ರವರೆಗೆ ಕಾನೂನು ಮತ್ತು ದತ್ತಿಗಳ ಸಚಿವರು ; 1967ರವರೆಗೆ ಆರೋಗ್ಯ ಮತ್ತು ಔಷಧಿ ಮತ್ತು 1968-71ರವರೆಗೆ ಶಿಕ್ಷಣ ಸಚಿವರಾಗಿದ್ದರು. 1971-73ರವರೆಗೆ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದರು ; 1975-76ರವರೆಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ; 1968-74ರವರೆಗೆ ಆಂಧ್ರ ಪ್ರದೇಶದ ತೆಲುಗು ಅಕಾಡೆಮಿ ಅಧ್ಯಕ್ಷರಾಗಿ ; 1972ರಿಂದ ಮದ್ರಾಸ್ನ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 1957-77ರವರೆಗೆ ಆಂಧ್ರ ಪ್ರದೇಶ ವಿಧಾನಸಭೆಯ ಸದಸ್ಯರಾಗಿದ್ದರು ; 1977-84ರವರೆಗೆ ಲೋಕಸಭಾ ಸದಸ್ಯರಾಗಿದ್ದರು ಹಾಗೂ 1984ರ ಡಿಸೆಂಬರ್ನಲ್ಲಿ ರಾಮ್ತೆಕ್ನಿಂದ ಎಂಟನೆ ಲೋಕಸಭೆಗೆ ಚುನಾಯಿತರಾಗಿದ್ದರು. 1978-79ರಲ್ಲಿ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಅಧ್ಯಕ್ಷರಾಗಿ ಅವರು ಲಂಡನ್ ವಿಶ್ವವಿದ್ಯಾಲಯದ ಏಷ್ಯನ್ ಅಂಡ್ ಆಫ್ರಿಕನ್ ಸ್ಟಡೀಸ್ನಿಂದ ಆಯೋಜಿಸಲಾಗಿದ್ದ ದಕ್ಷಿಣ ಏಷ್ಯಾ ಸಮಾವೇಶವೊಂದರಲ್ಲಿ ಭಾಗವಹಿಸಿದ್ದರು. ಶ್ರೀ ರಾವ್ ಅವರು ಆಂಧ್ರಪ್ರದೇಶ ಕೇಂದ್ರದ ಭಾರತೀಯ ವಿದ್ಯಾ ಭವನದ ಅಧ್ಯಕ್ಷರು ಸಹ ಆಗಿದ್ದರು. ಅವರು ಜನವರಿ 14, 1980ರಿಂದ ಜುಲೈ 18, 1984ರವರೆಗೆ ವಿದೇಶಾಂಗ ವ್ಯವಹಾರ ಸಚಿವರಾಗಿದ್ದರು ; ಜುಲೈ 19, 1984ರಿಂದ ಡಿಸೆಂಬರ್ 31, 1984ರವರೆಗೆ ಗೃಹ ಸಚಿವರಾಗಿದ್ದರು ; ಡಿಸೆಂಬರ್ 31, 1984ರಿಂದ ಸೆಪ್ಟೆಂಬರ್ 25ರವರೆಗೆ ರಕ್ಷಣಾ ಸಚಿವರಾಗಿದ್ದರು. ನಂತರ ಸೆಪ್ಟೆಂಬರ್ 25, 1985ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿ ಅಧಿಕಾರ ಸ್ವೀಕರಿಸಿದರು.

ಬಹುಮುಖಿ ವ್ಯಕ್ತಿತ್ವ:

ಅನೇಕ ಕ್ಷೇತ್ರಗಳಲ್ಲಿ ಅಪಾರ ಆಸಕ್ತಿ ಹೊಂದಿದ ವ್ಯಕ್ತಿಯಾಗಿದ್ದರು. ಸಂಗೀತ, ಸಿನಿಮಾ ಮತ್ತು ರಂಗಭೂಮಿಯನ್ನು ಬಹುವಾಗಿ ಇಷ್ಟಪಡುತ್ತಿದ್ದರು. ಭಾರತೀಯ ತತ್ತ್ವಶಾಸ್ತ್ರ ಮತ್ತು ಸಂಸ್ಕøತಿಯಲ್ಲಿ ವಿಶೇಷ ಒಲವು ಹೊಂದಿದ್ದರು. ಕಾಲ್ಪನಿಕ ವಿಜ್ಞಾನ ಹಾಗೂ ರಾಜಕೀಯ ವಿಶ್ಲೇಷಣೆಗಳನ್ನು ಬರೆಯುತ್ತಿದ್ದರು. ಹಲವು ಭಾಷೆಗಳನ್ನು ತಿಳಿದಿದ್ದ ಬಹು ಭಾಷಾ ಪಂಡಿತರಾಗಿದ್ದರು. ತೆಲುಗು ಮತ್ತು ಹಿಂದಿಗಳಲ್ಲಿ ಕವನಗಳನ್ನು ಬರೆಯುತ್ತಿದ್ದ ಅವರಿಗೆ ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಜ್ಞಾನಪೀಠದಿಂದ ಪ್ರಕಟಗೊಂಡ ದಿವಂಗತ ಶ್ರೀ ವಿಶ್ವನಾಥ ಸತ್ಯನಾರಾಯಣ ಅವರು ಪ್ರಸಿದ್ದ ‘ವೆಯಿ ಪಡಗಳು’ ತೆಲುಗು ಕಾದಂಬರಿಯನ್ನು ಹಿಂದಿಯಲ್ಲಿ ‘ಸಹಸ್ರಫನ್’ ಹೆಸರಿನಲ್ಲಿ ಪ್ರಕಟಿಸಿದರು ; ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ದಿವಂಗತ ಶ್ರೀ ಹರಿ ನಾರಾಯಣ ಅಪ್ಟೆ ಅವರ ಪ್ರಸಿದ್ದ ಮರಾಠಿ ಕಾದಂಬರಿಯನ್ನು ‘ಪನ್ ಲಕ್ಷತ್ ಕೊನ್ ಘೇಟೊ’ವನ್ನು ತೆಲುಗಿನಲ್ಲಿ ‘ಅಬಾಲ ಜೀವಿತಂ’ ಹೆಸರಿನಲ್ಲಿ ಭಾಷಾಂತರಿಸಿದರು. ಅವರು ಇತರ ಜನಪ್ರಿಯ ಕಾದಂಬರಿಗಳು ಮತ್ತು ಶ್ರೇಷ್ಠ ಕೃತಿಗಳನ್ನು ಮರಾಠಿಯಿಂದ ತೆಲುಗಿಗೆ ಹಾಗೂ ತೆಲುಗಿನಿಂದ ಹಿಂದಿಗೆ ಭಾಷಾಂತರ ಮಾಡಿದ್ದಾರೆ. ಅವರ ಅನೇಕ ಲೇಖನಗಳು ಬಹುಶ: ಅವರ ಒಂದು ಕಾವ್ಯನಾಮದ ಮೂಲಕ ವಿವಿಧ ನಿಯತಕಾಲಿಕಗಳಲ್ಲಿ ಪ್ರಕಟವಾಗಿದೆ. ರಾಜಕೀಯ ವಿಷಯಗಳು ಮತ್ತು ಅದಕ್ಕೆ ಸಂಬಂಧಪಟ್ಟ ವಿಚಾರಗಳ ಬಗ್ಗೆ ಅವರು ಅಮೆರಿಕ ಮತ್ತು ಪಶ್ಚಿಮ ಜರ್ಮನಿಯ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವರಾಗಿ 1974ರಲ್ಲಿ ಯು.ಕೆ, ಪಶ್ಚಿಮ ಜರ್ಮನಿ, ಸ್ವಿಟ್ಜರ್ಲೆಂಡ್, ಇಟಲಿ ಮತ್ತು ಈಜಿಪ್ಟ್ನಲ್ಲಿ ವ್ಯಾಪಕ ಪ್ರವಾಸ ಕೈಗೊಂಡರು.

ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದ ವೇಳೆ ಶ್ರೀ ರಾವ್ ಅವರು, ಅಂತಾರಾಷ್ಟ್ರೀಯ ರಾಜತಾಂತ್ರಿಕತೆಯ ಕ್ಷೇತ್ರಕ್ಕೆ ತಮ್ಮ ವಿದ್ವಾಂಸ ಪ್ರತಿಭೆ ಹಿನ್ನೆಲೆ ಹಾಗೂ ಸಮೃದ್ಧ ರಾಜಕೀಯ ಮತ್ತು ಅಡಳಿತಾತ್ಮಕ ಅನುಭವಗಳನ್ನು ಯಶಸ್ವಿಯಾಗಿ ಸಂವಹನ ಮಾಡಿದರು. ತಾವು ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ 1980ರ ಜನವರಿಯಲ್ಲಿ ನವದೆಹಲಿಯಲ್ಲಿ ನಡೆದ ತೃತೀಯ ಯೂನಿಡೋ ಸಮಾವೇಶದ ಅಧ್ಯಕ್ಷತೆ ವಹಿಸಿದರು. 1980ರ ಮಾರ್ಚ್ನಲ್ಲಿ ನ್ಯೂಯಾರ್ಕ್ನಲ್ಲಿ ನಡೆದ ಗ್ರೂಪ್ ಆಫ್ 77ರ ಸಭೆಯ ಅಧ್ಯಕ್ಷತೆ ವಹಿಸಿದ್ದರು. 1981ರ ಫೆಬ್ರವರಿಯಲ್ಲಿ ನಡೆದ ಅಲಿಪ್ತ ರಾಷ್ಟ್ರಗಳ ವಿದೇಶಾಂಗ ಸಚಿವರ ಸಮಾವೇಶದಲ್ಲಿ ಅವರು ವಹಿಸಿದ ಪಾತ್ರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು. ಶ್ರೀ ರಾವ್ ಅವರ ಅಂತಾರಾಷ್ಟ್ರೀಯ ಆರ್ಥಿಕ ವಿಸಯಗಳಲ್ಲಿ ಅವರು ತೋರಿದ ವೈಯಕ್ತಿಕ ಆಸಕ್ತಿಗಳಿಂದ 1981ರ ಮೇ ತಿಂಗಳಲ್ಲಿ ಕ್ಯಾರಕಾಸ್ನಲ್ಲಿ ನಡೆದ ಇಸಿಡಿಸಿ ಕುರಿತ ಗ್ರೂಪ್ ಆಫ್ 77 ಸಮಾವೇಶದಲ್ಲಿ ಭಾರತೀಯ ನಿಯೋಗದ ನೇತೃತ್ವ ವಹಿಸಲು ನೆರವಾಯಿತು.

1982 ಮತ್ತು 1983 ಭಾರತ ಮತ್ತು ಅದರ ವಿದೇಶಾಂಗ ನೀತಿಯಲ್ಲಿ ಯಶಸ್ವಿ ವರ್ಷ. ಕೊಲ್ಲಿ ಯುದ್ಧದ ನೆರಳಿನಲ್ಲಿ ಏಳನೇ ಶೃಂಗಸಭೆ ಆಯೋಜಿಸುವಂತೆ ಅಲಿಪ್ತ ರಾಷ್ಟ್ರಗಳ ಚಳವಳಿ ಭಾರತಕ್ಕೆ ಮನವಿ ಮಾಡಿತು. ಇದು ಭಾರತವು ಚಳವಳಿಯ ಅಧ್ಯಕ್ಷತೆ ವಹಿಸಲು ಹಾಗೂ ಶ್ರೀಮತಿ ಇಂದಿರಾ ಗಾಂಧಿ ಅವರು ಅದರ ಅಧ್ಯಕ್ಷರಾಗುವಂತೆ ಮಾಡಿತು. 1982ರಲ್ಲಿ ನವದೆಹಲಿ ಶೃಂಗಸಭೆ ಸಂದರ್ಭದಲ್ಲಿ ಅಲಿಪ್ತ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಗಳಿಗೆ ಶ್ರೀ ಪಿ.ವಿ.ನರಸಿಂಹರಾವ್ ಅಧ್ಯಕ್ಷತೆ ವಹಿಸಿದ್ದರು. ಅದೇ ವರ್ಷ ಇನ್ನೊಂದು ಶೃಂಗಸಭೆ ನಡೆಸುವಂತೆ ವಿಶ್ವಸಂಸ್ಥೆ ಸೂಚನೆ ಮೇರೆಗೆ ನಡೆದ ಸಮಾವೇಶದಲ್ಲೂ ಇವರು ಅಧ್ಯಕ್ಷರಾಗಿದ್ದು. ನ್ಯೂಯಾಕ್ನಲ್ಲಿ ನಡೆದ ವಿಶ್ವ ವಿವಿಧ ರಾಷ್ಟ್ರಗಳ ಸರ್ಕಾರಗಳ ಮುಖ್ಯಸ್ಥ ಸಮಾವೇಶದಲ್ಲೂ ಶ್ರೀ ರಾವ್ ಪ್ರಮುಖ ಪಾತ್ರ ವಹಿಸಿದ್ದರು.

ಶ್ರೀ ರಾವ್ ಅವರು 1983ರ ನವೆಂಬರ್ನಲ್ಲಿ ಪಶ್ಚಿಮ ಏಷ್ಯಾ ದೇಶಗಳಿಗೆ ಭೇಟಿ ನೀಡಿದ ವಿಶೇಷ ಅಲಿಪ್ತ ನಿಯೋಗದ ಅಧ್ಯಕ್ಷರೂ ಆಗಿದ್ದರು. ಪ್ಯಾಲೈಸ್ಟೀನ್ ವಿಮೋಚನಾ ಸಂಸ್ಥೆಯ ಬಿಕ್ಕಟ್ಟು ಪರಿಹಾರಕ್ಕಾಗಿ ಈ ನಿಯೋಗ ಶ್ರಮಿಸಿತು. ಶ್ರೀ ರಾವ್ ಅವರು ನವದೆಹಲಿಯಲ್ಲಿ ಕಾಮನ್ವೆಲ್ತ್ ರಾಷ್ಟ್ರಗಳ ಸರ್ಕಾರಗಳ ಮುಖ್ಯಸ್ಥರ ಹಾಗೂ ಸೈಪ್ರಸ್ ಕುರಿತ ಸಭೆಯಿಂದ ರಚಿತವಾದ ಕ್ರಿಯಾ ಸಮೂಹದಲ್ಲೂ ಸಕ್ರಿಯವಾಗಿ ತೊಡಗಿದ್ದರು.ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಶ್ರೀರಾವ್ ಅವರು ಯುಎಸ್ಎ, ಯುಎಸ್ಎಸ್ಆರ್, ಪಾಕಿಸ್ತಾನ, ಬಾಂಗ್ಲಾದೇಶ, ಇರಾನ್, ವಿಯೆಟ್ನಾಂ ಮತ್ತು ಗುಯಾನ ಸೇರಿದಂತೆ ಜಂಟಿ ಆಯೋಗಗಳ ಸದಸ್ಯ ದೇಶವನ್ನು ಭಾರತದ ಪರವಾಗಿ ಅಧ್ಯಕ್ಷತೆ ವಹಿಸಿದ್ದರು.ಶ್ರೀನರಸಿಂಹ ರಾವ್ ಅವರು ಜುಲೈ 19, 1984ರಂದು ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ನವೆಂಬರ್ 5, 1984ರಂದು ಯೋಜನಾ ಸಚವರ ಹೆಚ್ಚುವರಿ ಹೊಣೆಯೊಂದಿಗೆ ಅವರನ್ನು ಈ ಹುದ್ದೆಗೆ ಮರು ನೇಮಕ ಮಾಡಲಾಯಿತು. ಡಿಸೆಂಬರ್ 31, 1985 ರಿಂದ ಸೆಪ್ಟೆಂಬರ್ 25, 1985ರವರೆಗೆ ರಕ್ಷಣಾ ಸಚಿವರಾಗಿ ನೇಮಕಗೊಂಡರು. ಸೆಪ್ಟೆಂಬರ್ 25, 1985ರಮದು ಅವರು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿ ಅಧಿಕಾರ ವಹಿಸಿಕೊಂಡರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News