ಉಡಾಫೆ ಹೇಳಿಕೆಗಳಿಂದ ಕಾಲಹರಣ ಮಾಡುವ ಬದಲು ವಿದ್ಯಾರ್ಥಿಗಳನ್ನು ರಕ್ಷಿಸಿ: ಸಿದ್ದರಾಮಯ್ಯ

ಪ್ರಧಾನಿ ಮೋದಿ ಮತ್ತು ವಿದೇಶಾಂಗ ವ್ಯವಹಾರ ಸಚಿವರು ಸಕಾಲದಲ್ಲಿ ವಿದ್ಯಾರ್ಥಿಗಳ ನೆರವಿಗೆ ಧಾವಿಸಿ ಭಾರತಕ್ಕೆ ಕರೆತಂದಿದ್ದರೆ ಅಮೂಲ್ಯವಾದ ಜೀವವೊಂದು ಉಳಿಯುತ್ತಿತ್ತು ಅಂತಾ ಸಿದ್ದರಾಮಯ್ಯ ಹೇಳಿದ್ದಾರೆ.

Written by - Zee Kannada News Desk | Last Updated : Mar 2, 2022, 06:13 PM IST
  • ಪ್ರಹ್ಲಾದ್ ಜೋಶಿ ಉಡಾಫೆ ಹೇಳಿಕೆಗಳಿಂದ ಕಾಲಹರಣ ಮಾಡುವ ಬದಲು ವಿದ್ಯಾರ್ಥಿಗಳ ಸುರಕ್ಷತೆ ಕಡೆ ಗಮನಹರಿಸಲಿ
  • ವಿದ್ಯಾರ್ಥಿಗಳು ಸಾವು-ಬದುಕಿನ ಹೋರಾಟ ನಡೆಸುವ ಅಸಹಾಯಕ ಸ್ಥಿತಿಗೆ ತಲುಪಲು ಕೇಂದ್ರದ ಬೇಜವಾಬ್ದಾರಿ ಕಾರಣ
  • ಪ್ರಧಾನಿ ಮೋದಿ ಕಾಲಹರಣ ಮಾಡಿದರೇ ವಿನಹ ಸಾವಿರಾರು ಭಾರತೀಯರ ಸುರಕ್ಷತೆ ಬಗ್ಗೆ ಗಮನನೀಡಲಿಲ್ಲ
ಉಡಾಫೆ ಹೇಳಿಕೆಗಳಿಂದ ಕಾಲಹರಣ ಮಾಡುವ ಬದಲು ವಿದ್ಯಾರ್ಥಿಗಳನ್ನು ರಕ್ಷಿಸಿ: ಸಿದ್ದರಾಮಯ್ಯ   title=
ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ(Pralhad Joshi) ಉಡಾಫೆ ಹೇಳಿಕೆಗಳಿಂದ ಕಾಲಹರಣ ಮಾಡುವ ಬದಲಿಗೆ ಯುಕ್ರೇನ್ ನಲ್ಲಿ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳ ಸುರಕ್ಷತೆ ಕಡೆ ಗಮನಹರಿಸಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಟೀಕಾಪ್ರಹಾರ ನಡೆಸಿದ್ದಾರೆ.

‘ಯುದ್ಧಗ್ರಸ್ತ ಯುಕ್ರೇನ್ (Russia Ukraine War)ನಲ್ಲಿ ಸಂಕಷ್ಟಕ್ಕೆ ಈಡಾಗಿರುವ ಭಾರತೀಯರು ಮುಖ್ಯವಾಗಿ ವಿದ್ಯಾರ್ಥಿಗಳು ಸಾವು-ಬದುಕಿನ ಹೋರಾಟ ನಡೆಸುತ್ತಿರುವಂತಹ ಅಸಹಾಯಕ ಸ್ಥಿತಿಗೆ ತಲುಪಲು ಕೇಂದ್ರ ಸರ್ಕಾರ(BJP Government)ದ ಅನಿಶ್ಚಿತ ಮತ್ತು ಬೇಜವಾಬ್ದಾರಿ ನೀತಿ-ನಿಲುವುಗಳೂ ಕಾರಣ’ವೆಂದು ಕಿಡಿಕಾರಿದ್ದಾರೆ.

‘ಕಳೆದ ಕೆಲವು ತಿಂಗಳುಗಳಿಂದ ಯುಕ್ರೇನ್ ಮತ್ತು ರಷ್ಯಾ ನಡುವೆ(Russia Ukraine Crisis) ಯಾವುದೇ ಕ್ಷಣದಲ್ಲಿ ಯುದ್ಧ ಸ್ಫೋಟವಾಗಬಹುದೆಂಬ ವರದಿಗಳ ಹಿನ್ನೆಲೆ ವಿಶ್ವದ ಹಲವಾರು ದೇಶಗಳು ಅಲ್ಲಿರುವ ತಮ್ಮ ಪ್ರಜೆಗಳನ್ನು ಸುರಕ್ಷಿತವಾಗಿ ವಾಪಸ್ ಕರೆಸಿಕೊಳ್ಳುವ ಪ್ರಯತ್ನ ಪ್ರಾರಂಭಿಸಿತ್ತು. ಆದರೆ ಭಾರತ ಮಾತ್ರ ಯುದ್ಧ ಶುರುವಾಗುವವರೆಗೆ ಭಾರತೀಯರ ಸುರಕ್ಷತೆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ತನ್ನನ್ನು ವಿಶ್ವಗುರು ಎಂದು ಕೊಂಡಾಡುತ್ತಾ ಭಕ್ತರು ನಡೆಸುತ್ತಿರುವ ಬೋಪರಾಕ್ ಭಜನೆಗೆ ಪ್ರಧಾನಿಯವರು ತಲೆ ತೂಗುತ್ತಾ ಕಾಲಹರಣ ಮಾಡಿದರೇ ವಿನಹ ಯುದ್ಧಗ್ರಸ್ತ ಯುಕ್ರೇನ್ ನಲ್ಲಿರುವ ಸಾವಿರಾರು ಭಾರತೀಯರ ಸುರಕ್ಷತೆ ಬಗ್ಗೆ ಗಮನನೀಡಲೇ ಇಲ್ಲ’ ಅಂತಾ ಕುಟುಕಿದ್ದಾರೆ.

ಇದನ್ನೂ ಓದಿ: Russia Ukraine Crisis: ‘ಮಲಿಬು’ ರಕ್ಷಣೆಗೆ ಮುಂದಾದ ಬೆಂಗಳೂರು ಯುವಕರ ತಂಡ

‘ಕೇಂದ್ರ ಸರ್ಕಾರ(BJP Government)ದ ಈ ನಿರ್ಲಕ್ಷ್ಯದಿಂದಾಗಿಯೇ ಕರ್ನಾಟಕದ ಯುವ ವಿದ್ಯಾರ್ಥಿ ನವೀನ್ ಪ್ರಾಣ ಕಳೆದುಕೊಂಡು ಆತನ ಹೆತ್ತವರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಆ ವಿದ್ಯಾರ್ಥಿಯ ಸಹಪಾಠಿಗಳು ಮತ್ತು ಹೆತ್ತವರ ಹೇಳಿಕೆಗಳೇ ಕೇಂದ್ರ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ವ್ಯವಹಾರ ಸಚಿವರು ಸಕಾಲದಲ್ಲಿ ಈ ವಿದ್ಯಾರ್ಥಿಗಳ ನೆರವಿಗೆ ಧಾವಿಸಿ ಅವರನ್ನು ಭಾರತಕ್ಕೆ ಕರೆತಂದಿದ್ದರೆ ಅಮೂಲ್ಯವಾದ ಜೀವವೊಂದು ಉಳಿಯುತ್ತಿತ್ತು’ ಅಂತಾ ಸಿದ್ದರಾಮಯ್ಯ ಹೇಳಿದ್ದಾರೆ.

‘ನಮ್ಮೊಳಗಿನ ರಾಜಕೀಯ ಭಿನ್ನಾಭಿಪ್ರಾಯಗಳು, ಸೈದ್ಧಾಂತಿಕ ವ್ಯತ್ಯಾಸಗಳು ಏನೇ ಇದ್ದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೈಗೊಳ್ಳುವ ನಿರ್ಧಾರವನ್ನು ಬೆಂಬಲಿಸುವುದು ನಮ್ಮ ಕರ್ತವ್ಯವಾಗಿದೆ. ಈ ಕರ್ತವ್ಯ ಪ್ರಜ್ಞೆಯಿಂದಾಗಿ ಕೇಂದ್ರ ಸರ್ಕಾರದ ವೈಫಲ್ಯಗಳ ಪಟ್ಟಿಯನ್ನು ಪೂರ್ಣವಾಗಿ ನೀಡಲು ನಾನು ಬಯಸುವುದಿಲ್ಲ. ಯುಕ್ರೇನ್(Ukraine) ಮತ್ತು ರಷ್ಯಾ ನಡುವಿನ ಈಗಿನ ಯುದ್ಧಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಲೇ ಬೇಕಾಗುತ್ತದೆ’ ಅಂತಾ ಹೇಳಿದ್ದಾರೆ.

‘ಯುಕ್ರೇನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಯುಕ್ರೇನ್ ಮತ್ತು ರಷ್ಯಾ ದೇಶಗಳೆರಡರ ವೈಷಮ್ಯದ ನಡುವೆ ಸಿಕ್ಕಿಹಾಕಿಕೊಂಡು ಸಾವು-ಬದುಕಿನ ಹೋರಾಟ ನಡೆಸುತ್ತಿದ್ದಾರೆ. ಯುಕ್ರೇನ್ ನ ಬಹಳಷ್ಟು ಪ್ರದೇಶಗಳಲ್ಲಿ ಆ ದೇಶದ ಜನ ಮತ್ತು ಸೈನಿಕರು ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ-ದೌರ್ಜನ್ಯಗಳನ್ನು ನಡೆಸುತ್ತಿರುವುದು ಮಾತ್ರವಲ್ಲ, ಅಪಹರಿಸಿಕೊಂಡು ಹೋಗಿರುವ ಘಟನೆಗಳು ಕೂಡಾ ವರದಿಯಾಗಿವೆ. ಇದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: 'ನಾಲ್ಕುವರೆ ಲಕ್ಷ ಕೋಟಿ ಸಾಲದ ಸುಳಿಯಲ್ಲಿ ರಾಜ್ಯ ಸರ್ಕಾರ'

‘ಯುದ್ಧಗ್ರಸ್ತ ದೇಶದಿಂದ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಕಾರ್ಯಾಚಾರಣೆ ಭಾರತಕ್ಕೆ ಹೊಸದೇನಲ್ಲ. ಹಿಂದೆಯೂ ಗಲ್ಪ್  ಯುದ್ಧ ನಡೆಯುತ್ತಿದ್ದಾಗ ಸುಮಾರು ಒಂದೂವರೆ ಲಕ್ಷ ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿತ್ತು. ಲಿಬಿಯಾದ ಯುದ್ಧದ ಸಮಯದಲ್ಲಿ ಸುಮಾರು 15,000 ಮತ್ತು ಯೆಮನ್ ಯುದ್ಧ ಕಾಲದಲ್ಲಿ ಅಂದಾಜು 5,000 ಭಾರತೀಯರನ್ನು ಆಗಿನ ಕಾಂಗ್ರೆಸ್ ಸರ್ಕಾರ ಭಾರತಕ್ಕೆ ಕರೆತಂದಿತ್ತು. ಆಗಿನ ಕಾಂಗ್ರೆಸ್ ಸರ್ಕಾರ ಇಲ್ಲವೇ ಕಾಂಗ್ರೆಸ್ ಪಕ್ಷ ಆ ಕಾರ್ಯಚಾರಣೆ ಬಗ್ಗೆ ನರೇಂದ್ರ ಮೋದಿ ಸರ್ಕಾರದಂತೆ ಪ್ರಚಾರ ಮಾಡಿ ಅದನ್ನು ರಾಜಕೀಯವಾಗಿ ಬಳಸಿಕೊಳ್ಳುವ ಪ್ರಯತ್ನ ಮಾಡಿರಲಿಲ್ಲ’ ಅಂತಾ ಸಿದ್ದರಾಮಯ್ಯ ಕುಟುಕಿದ್ದಾರೆ.

‘ಪ್ರಧಾನಿ ಮೋದಿ(PM Modi) ಸರ್ಕಾರ ಯುಕ್ರೇನ್ ನಿಂದ ಭಾರತೀಯರನ್ನು ಕರೆತರುವ ಕಾರ್ಯಚಾರಣೆಗೂ ಗಂಗಾ ನದಿಯ ಹೆಸರು ಕೊಟ್ಟು ಅದನ್ನು ಉತ್ತರ ಪ್ರದೇಶದ ಚುನಾವಣೆಯ ಪ್ರಚಾರದಲ್ಲಿ ಬಳಸಲು ಹೊರಟಿದೆ. ಇದು ಬಿಜೆಪಿ ಕ್ಷುಲಕ ರಾಜಕೀಯದ ದುರ್ಬುದ್ಧಿಗೆ ಸಾಕ್ಷಿ. ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಕೇಂದ್ರ ಸರ್ಕಾರದ ಜೊತೆ ನಿರಂತರ ಸಂಪರ್ಕವಿಟ್ಟುಕೊಂಡು ಯುಕ್ರೇನ್ ನಲ್ಲಿ ಸಂಕಷ್ಟದಲ್ಲಿರುವ ಭಾರತೀಯರನ್ನು ವಾಪಸು ಕರೆತರುವ ಪ್ರಯತ್ನವನ್ನು ಮಾಡಬೇಕು’ ಅಂತಾ ಒತ್ತಾಯಿಸಿದ್ದಾರೆ.

‘ಇದೇ ವೇಳೆ ಕೇಂದ್ರ ಸರ್ಕಾರ ಯುಕ್ರೇನ್ ಮತ್ತು ರಷ್ಯಾ ದೇಶಗಳ ಜೊತೆ ಮಾತುಕತೆ ನಡೆಸಿ ಭಾರತೀಯರ ಸುರಕ್ಷತೆಯನ್ನು ಖಾತರಿಪಡಿಸಬೇಕು. ವಿದೇಶದಲ್ಲಿ ವೈದ್ಯಕೀಯ ಪದವಿ‌ ಪಡೆದು ಬರುವವರು ಇಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಲು ಅಗತ್ಯವಿರುವ ಪರೀಕ್ಷೆಯಲ್ಲಿ ಪಾಸಾಗುವುದಿಲ್ಲವೆಂಬ ಸಚಿವ ಪ್ರಹ್ಲಾದ ಜೋಶಿಯವರ ಹೇಳಿಕೆ ಅತ್ಯಂತ ಬೇಜವಾಬ್ದಾರಿತನದ್ದಾಗಿದೆ’ ಅಂತಾ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕೇಂದ್ರದ ನರೇಂದ್ರ ಮೋದಿ‌(Narendra Modi) ಸರ್ಕಾರ ಏಕರೂಪದ ಪರೀಕ್ಷೆಯ ನೆಪದಲ್ಲಿ ನೀಟ್ ಪರೀಕ್ಷೆಯನ್ನು ಗೊಂದಲಮಯವಾಗಿ ಮಾಡಿರುವ ಕಾರಣದಿಂದ ಆಗಿರುವ ಅನಾಹುತಗಳ‌ ಬಗ್ಗೆ ‌ ಚರ್ಚಿಸಲು ಇದು ಸರಿಯಾದ ಕಾಲ‌ವಲ್ಲ. ಸಚಿವರು ಇಂತಹ ಉಡಾಫೆ ಹೇಳಿಕೆಗಳಿಂದ ಕಾಲಹರಣ ಮಾಡುವ ಬದಲಿಗೆ ಯುಕ್ರೇನ್ ನಲ್ಲಿ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳ ಸುರಕ್ಷತೆ ಕಡೆ ಗಮನ ಹರಿಸಲಿ’ ಅಂತಾ ಸಲಹೆ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News